ಕೇಬಲ್ ವರ್ಗಾವಣೆ

ಒಂದು ದೇಶದಲ್ಲಿರುವ ಬ್ಯಾಂಕು ಇನ್ನೊಂದು ದೇಶದಲ್ಲಿರುವ ಬ್ಯಾಂಕಿನಿಂದ ಕೇಬಲ್ ಮೂಲಕ ಪಡೆದ ಸೂಚನೆಗೆ ಅನುಗುಣವಾಗಿ ಮಾಡಿದ ಪಾವತಿ (ಕೇಬಲ್ ಟ್ರಾನ್ಸ್‍ಫರ್). ಎಂದರೆ ಇದು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಕೇಬಲ್‍ಗ್ರಾಂ ಮೂಲಕ ಹಣದ ತತ್‍ಕ್ಷಣದ ವರ್ಗಾವಣೆ. ಉದಾಹರಣೆಗೆ, ದೆಹಲಿಯಲ್ಲಿರುವ ಒಬ್ಬ ವ್ಯಕ್ತಿ ಲಂಡನಿನಲ್ಲಿರುವ ಒಬ್ಬ ವ್ಯಕ್ತಿಗೆ ಒಂದು ನಿರ್ದಿಷ್ಟ ಮೊಬಲಗನ್ನು ತಲುಪಿಸಲಿಚ್ಛಿಸಿದಲ್ಲಿ, ದೆಹಲಿಯಲ್ಲಿಯ ಒಂದು ವಿದೇಶೀ ವಿನಿಮಯ ಬ್ಯಾಂಕಿನ ಮೂಲಕ ಹೀಗೆ ಮಾಡಬಹುದು. ವರ್ಗಾವಣೆದಾರ ಯಥಾಸೂಕ್ತವಾದ ಮೊಬಲಗನ್ನು ಠೇವಣಿ ಮಾಡಿದ ಕೂಡಲೇ ದೆಹಲಿಯ ಬ್ಯಾಂಕು ತನ್ನ ಲಂಡನ್ ಶಾಖೆಗೆ ಅಥವಾ ಸಂವಾದಿಗೆ (ಕರೆಸ್ಪಾಂಡೆಂಟ್) ಕೇಬಲ್ ಕಳಿಸಿ, ಸೂಚಿತವಾದ ಮೊಬಲಗನ್ನು ಆ ನಗರದಲ್ಲಿರುವ ಪ್ರಾಪ್ತಿಕರ್ತನಿಗೆ (ಪೇಯೀ) ಕೂಡಲೇ ಕೊಡಬೇಕೆಂದು ತಿಳಿಸುತ್ತದೆ. ಹಣಕ್ಕಾಗಿ ಪ್ರಾಪ್ತಿಕರ್ತ ಎಲ್ಲಿ ಯಾವ ಸಮಯದಲ್ಲಿ ಹಾಜರಾಗಬೇಕೆಂಬುದನ್ನು ಅವನಿಗೆ ಲಂಡನಿನ ಅಭಿಕರ್ತ (ಏಜೆಂಟ್) ಸಾಮಾನ್ಯವಾಗಿ ತಿಳಿಯಹೇಳುತ್ತಾನೆ. ಒಮ್ಮೊಮ್ಮೆ ದೆಹಲಿಯ ಬ್ಯಾಂಕೇ ಕೇಬಲ್ ಮೂಲಕ ತಿಳಿಸುವುದೂ ಉಂಟು.

	ಅಗತ್ಯವಾದ ಹಣವನ್ನು ಪಡೆದುಕೊಳ್ಳಲು ಮತ್ತು ವ್ಯವಹಾರದಲ್ಲಿ ಅಲ್ಪ ಲಾಭವನ್ನೂ ಗಳಿಸಿಕೊಳ್ಳಲು ಸಾಕಾಗುವಂತೆ ಕೇಬಲ್ ವಿನಿಮಯದರವನ್ನು ನಿಶ್ಚಯಿಸಲಾಗುತ್ತದೆ. ಈ ದರ ಚೆಕ್ ಅಥವಾ ವಾಯಿದೆ ದರಕ್ಕಿಂತ ಅಧಿಕವಾಗಿರುತ್ತದೆ. ಏಕೆಂದರೆ ಕೇಬಲ್ ವರ್ಗಾವಣೆಯಲ್ಲಿ ಅಭಿಕರ್ತ ಅಥವಾ ಸಂವಾದಿ ತತ್‍ಕ್ಷಣವೇ ಹಣವನ್ನು ಪಾವತಿ ಮಾಡಬೇಕು. ಆದರೆ ವರ್ಗಾವಣೆ ಅಥವಾ ವಾಯಿದೆ ವರ್ಗಾವಣೆಯಲ್ಲಿ ಹೀಗಲ್ಲ. ವರ್ಗಾವಣೆಯ ಮಾರಾಟ ಆದ ಅನಂತರವೂ ಸ್ವಲ್ಪಕಾಲ ಅವನು ವಿದೇಶಿ ಹಣವನ್ನು ಬಳಸಿಕೊಳ್ಳಲು ಅವಕಾಶವುಂಟು. ಕೇಬಲ್ ಬಂದ ಅನಂತರ ಹಣ ಪಾವತಿ ಮಾಡಬೇಕೆಂಬುದು ಕೇಬಲ್ ವರ್ಗಾವಣೆಯ ನಿಯಮ. ಆದರೆ ಇದಕ್ಕೂ ಸ್ವಲ್ಪಕಾಲ ಹಿಡಿಸುತ್ತದೆ. ಪ್ರಾಪ್ತಿಕರ್ತನಿಗೆ ತಿಳಿವಳಿಕೆ ಕಳಿಸುವುದಕ್ಕೂ ಕಾಲ ಬೇಕು. ಭಾರತ-ಇಂಗ್ಲೆಂಡ್‍ಗಳ ನಡುವಣ ವ್ಯವಹಾರಗಳಲ್ಲಿ ವರ್ಗಾವಣೆಯ ಮಾರಾಟ ಆದ ಮರುದಿನ ಪಾವತಿ ಮಾಡುವುದು ವಾಡಿಕೆ.    		
 (ಸಿ.ಸಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ